ಕರ್ನಾಟಕ ರಾಜ್ಯದ ಪ್ರಮುಖ ಅಲೆಮಾರಿ ಬುಡಕಟ್ಟುಗಳ ಪೈಕಿ ಒಂದು. ರಾಜಸ್ತಾನದ ಕಡೆಯಿಂದ ವಲಸೆ ಬಂದವರೆಂದು ಹೇಳಲಾಗುವ ಇವರಿಗೆ ಕರ್ನಾಟಕದಲ್ಲಿ ಹಲವಾರು ಹೆಸರುಗಳಿವೆ. ಬೆಳಗಾಂವಿಯ ಕಡೆ ಇವರನ್ನು ಲಮಾಣಿ, ಬಂಜಾರ, ವಂಜಾರ ಎಂತಲೂ ಕಲ್ಬುರ್ಗಿಯ ಕಡೆ ಸುಗಲಿ, ಸುಕಲಿ, ಲಂಬಾಡಾ, ವಂಜಾರಿ ಎಂತಲೂ ಮೈಸೂರು  ಕಡೆ ಲಂಬಾಣಿ, ಬಂಜಾರ ಎಂತಲೂ  ಕರೆಯುತ್ತಾರೆ. ಲಂಬಾಣಿಗರು ಕಷ್ಟ ಜೀವಿಗಳು. ಇವರು ಅಡಕೆ ಹಾಗೂ ಉಪ್ಪಿನ ವ್ಯಾಪಾರ ಮಾಡುತ್ತಿದ್ದರೆಂದು ತಿಳಿದು ಬಂದಿದೆ. ಕರ್ನಾಟಕದಲ್ಲಿ ಲಂಬಾಣಿಗರ ಮುಖ್ಯವೃತ್ತಿ ಸರಕುಸಾಗಣೆ. ಗುಡ್ಡಗಳ ದಾರಿಗಳಲ್ಲೂ ಅವರು ಎತ್ತಿನ ಮೇಲೆ ಸರಕುಗಳನ್ನು ಸಾಗಿಸುತ್ತಾರೆ. ಲಂಬಾಣಿಗರು ಸಾಮಾನ್ಯವಾಗಿ ತಮ್ಮದೇ ಆದ ಗುಂಪುಗಳಲ್ಲಿ ವಾಸಿಸುತ್ತಾರೆ. ಆ ಗುಂಪುಗಳನ್ನು ತಾಂಡಾಗಳೆಂದು ಕರೆಯುತ್ತಾರೆ. ಪ್ರತಿಯೊಂದು ತಾಂಡಾಕ್ಕೂ ಒಬ್ಬ ನಾಯಕ ಇರುತ್ತಾನೆ. ಅವನ ಮಾತಿನಂತೆ ಎಲ್ಲ ಕೆಲಸಗಳು ನಡೆಯುತ್ತವೆ. ಲಂಬಾಣಿ ಮಂದಿಗೆ ನಾಯಕನ ಬಗ್ಗೆ ಅಪಾರ ಗೌರವ ಇದೆ. ನಾಯಕನ ಅಧಿಕಾರ ವಂಶಪಾರಂಪರ್ಯವಾದುದು.
 
ಲಂಬಾಣಿಗರು ಸೇವಾಭಾಯಿ, ಮರಿಯಮ್ಮ, ಕಂಪಾಲಮ್ಮ, ಗುಳ್ಳಮ್ಮ ಮುಂತಾದ ಕುಲದೇವತೆಯರನ್ನು ಪೂಜಿಸುತ್ತಾರೆ. ಕೃಷ್ಣನನ್ನೂ ಆರಾಧಿಸುತ್ತಾರೆ. ದಸರ, ಹೋಳಿ ಇವರ ಪ್ರಮುಖ ಹಬ್ಬಗಳು. ನಾಗರ ಪಂಚಮಿ, ಕಾರಹುಣ್ಣಿಮೆಯನ್ನು ಆಚರಿಸುವರು. ಇವರು ಮಾತಾಡುವ ಭಾಷೆಗೆ ಲಿಪಿ ಇಲ್ಲ. ಮರಾಠಿ, ರಾಜಸ್ತಾನಿ ಭಾಷಾಶಬ್ದಗಳು ಇವರ ಭಾಷೆಯಲ್ಲಿ ಹೆಚ್ಚು ಸಂಖ್ಯೆಯಲ್ಲಿವೆ. 

ಲಂಬಾಣಿಗಳ ವೇಷಭೂಷಣಗಳು ವಿಶಿಷ್ಟವಾಗಿರುತ್ತವೆ. ಮಹಿಳೆಯರ ಉಡುಗೆತೊಡುಗೆ ಬಲು ಆಕರ್ಷಕ. ಕೆಂಪು ಬಣ್ಣದ ಲಂಗ (ಪೇಟಿಯಾ), ಅದರ ಮೇಲೆ ಮತ್ತು ಅಂಚಿನಲ್ಲಿ ಕಸೂತಿ ಹಾಕಿದ ಕುಪ್ಪಸ, ತಲೆಯ ಮೇಲಿನಿಂದ ಮೇಲು ಸೆರಗಿನಂತೆ ಇಳಿಬಿಟ್ಟ ರಂಗುರಂಗಿನ ಮೇಲುವಸ್ತ್ರ. ಈ ವಸ್ತ್ರಕ್ಕೆ ಗಾಜಿನ ಬಿಲ್ಲೆಗಳು, ವಸ್ತ್ರದ ಅಂಚಿನಲ್ಲಿ ಚಿಕ್ಕ ಬೆಳ್ಳಿ ಗೆಜ್ಜೆಗಳ ಸರ ಜೋಡಿಸಲ್ಪಟ್ಟಿರುತ್ತವೆ. ಸಾಮಾನ್ಯವಾಗಿ ಹಳದಿ, ಕೆಂಪು ಅಥವಾ ನೀಲಿ ಬಟ್ಟೆಯನ್ನು ಇಷ್ಟಪಡುತ್ತಾರೆ. ಬೆಳ್ಳಿ, ತಾಮ್ರ, ಕಂಚು ಮತ್ತು ದಂತದಿಂದ ಮಾಡಿದ ಆಭರಣಗಳನ್ನು ಧರಿಸುತ್ತಾರೆ. ಮೂಗಿಗೆ ಮುಕುರ, ಕಿವಿಗೆ ಬೆಳ್ಳಿಯ ಕನಿಯ, ಇದಕ್ಕೆ ಬೆಳ್ಳಿಯ ಜೋತಾಡುವ  ಸರಪಲ ಇರುತ್ತದೆ. ಮದುವೆ ಆದವರು ಹಣೆಯ ಮೇಲೆ ಗುಜರಿಗಳನ್ನು ಧರಿಸುತ್ತಾರೆ. ಕೆನ್ನೆಯ ಎರಡೂ ಬದಿಗೆ ಇಳಿಬಿಟ್ಟ ಜೋಟ್ಲಿ (ಕೆನ್ನೆಗೆಜ್ಜೆ), ಕಾಲಿಗೆ ದೊಡ್ಡ ಬೆಳ್ಳಿಯ ಕಡಗ ಜೊತೆಗೆ ದಂತದ ಬಳೆಗಳು ಇರುತ್ತವೆ. ಇಷ್ಟೆಲ್ಲ ವೇಷಭೂಷಣದ ಜೊತೆಗೆ ತೋಳು, ಹಣೆ ಮತ್ತು ಕೆನ್ನೆಗಳ ಮೇಲೆ ಕಲಾತ್ಮಕವಾಗಿ ಹಚ್ಚೆಯನ್ನು ಹುಯಿಸಿಕೊಂಡಿರುತ್ತಾರೆ. ಮೂಗಿನ ಎಡಭಾಗದ ಮೇಲಿನ ಹಚ್ಚೆ ಚುಕ್ಕೆ ಕೆಲವಡೆ ಈ ಜನರ ಗುರುತಿನ ಚಿಹ್ನೆಗಳಾಗಿವೆ. ಲಂಬಾಣಿ ಗಂಡಸರು ಕಟ್ಟುಮಸ್ತಾದ ದೇಹವುಳ್ಳವರು. ಇವರೂ ಆಭರಣಗಳನ್ನು ಧರಿಸುವುದುಂಟು. ಹಬ್ಬದ ಸಂದರ್ಭದಲ್ಲಿ ತಲೆಗೆ ದೊಡ್ಡ ಪೇಟ ಇಲ್ಲವೆ ಟೋಪಿ ಧರಿಸುವರು.

ಲಂಬಾಣಿಯರಲ್ಲಿ ವಿವಾಹ ಅದ್ದೂರಿಯಾಗಿ ನಡೆಯುತ್ತದೆ. ಹಿರಿಯರೇ ವಧು-ವರರನ್ನು ನಿಶ್ಚಯಿಸುವವರು. ಮದುಮಗ ಕೆಂಪು ಜುಬ್ಬಾ, ಪಾಯಿಜಾಮ, ಸೊಂಟಕ್ಕೆ ತುಮಾನ (ಬಟ್ಟೆ) ಧರಿಸುತ್ತಾನೆ. ವಧುವನ್ನು ಅಲಂಕರಿಸಿ ಎತ್ತಿನ ಮೇಲೆ ನಿಲ್ಲಿಸುತ್ತಾರೆ. ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿಯರನ್ನು ಕುರಿತು ಹೇಳುವ ಹಾಡು ವಧುವಿಗೆ ದುಃಖ ಉಂಟುಮಾಡುತ್ತದೆ. ವಧುವಿಗೆ ದುಃಖವನ್ನು ಬರಿಸುವಂತೆ ಮಾಡುವುದು ಇವರಲ್ಲಿ ಒಂದು ಸಂಪ್ರದಾಯ. ವಿಧವಾ ವಿವಾಹವೂ ಇವರಲ್ಲುಂಟು. ವಿಚ್ಛೇದನ ಪಡೆದ ಹೆಂಗಸು ಸೀರೆ ಉಡುಕೆ ಮಾಡಿಕೊಳ್ಳುತ್ತಾಳೆ. ಆಗ ಎರಡನೆಯ ಗಂಡ ಮೊದಲನೆಯ ಗಂಡನಿಗೆ ತೆರಕೊಟ್ಟು ಹಬ್ಬದೂಟ ಹಾಕಿಸಬೇಕು. ಪುನರ್ ವಿವಾಹದ ಮಹಿಳೆಯನ್ನು ಮದುವೆ ಮುಂತಾದ ಸಮಾರಂಭಗಳಿಗೆ ಸೇರಿಸುವುದಿಲ್ಲ.

ಇವರಲ್ಲಿ ಮಗು ಜನಿಸಿದಾಗ ತಾಯಿ ಅಸ್ಪೃಶ್ಯಳು. ಒಂದು ತಿಂಗಳ ಬಳಿಕ ಬಾವಿಗೆ ಪೂಜೆ ಸಲ್ಲಿಸಿ ನೀರು ತರಬೇಕು. ಮಗುವಿಗೆ ನಾಮಕರಣವನ್ನು ಅದ್ದೂರಿಯಿಂದಲೇ ಮಾಡುತ್ತಾರೆ. ಮೂರರಿಂದ ಏಳು ವರ್ಷದ ಗಂಡು ಮಗುವಿಗೆ ಚೌಲ ಸಂಸ್ಕಾರ ಮಾಡುತ್ತಾರೆ. ಇವರಲ್ಲಿ ಹೆಣ್ಣು ಋತುಮತಿಯಾದದ್ದನ್ನು ತಂದೆತಾಯಿ ನೋಡುವಂತಿಲ್ಲ. ಪ್ರತ್ಯೇಕ ಗುಡ್ಲನ್ನು ಹಾಕಿ ಹನ್ನೆರಡು ದಿನ ಅಲ್ಲೇ ಇರಿಸುತ್ತಾರೆ. ಹನ್ನೆರಡನೆಯ ದಿನ ತಾಂಡಾದವರಿಗೆಲ್ಲ ಸಿಹಿ ಊಟ ಹಾಕಿಸಿ ಒಳಗೆ ಕರೆದುಕೊಳ್ಳುತ್ತಾರೆ. ಗರ್ಭಿಣಿಯಾದವಳಿಗೆ ಸೀಮಂತ ಅಥವಾ ಉಡಿತುಂಬುವ ಶಾಸ್ತ್ರವೇನಿಲ್ಲ. ಹೆರಿಗೆಗಾಗಿ ಪ್ರತ್ಯೇಕ ಚಿಕ್ಕ ಗುಡಿಸಲನ್ನು ನಿರ್ಮಿಸುತ್ತಾರೆ. ಮದುವೆಯಾದವರು ಸತ್ತರೆ ಅವರನ್ನು ಸುಡುತ್ತಾರೆ. ಮಿಕ್ಕವರನ್ನು ಹೂಳುವ ಸಂಪ್ರದಾಯ ಇದೆ. ಪ್ರಾದೇಶಿಕವಾಗಿ ಲಂಬಾಣಿಗರ ಕೆಲವು ಸಂಪ್ರದಾಯ ಆಚರಣೆಯಲ್ಲಿ ಬದಲಾವಣೆಗಳಾಗಿವೆ.

ಕಥೆ, ಗೀತೆ, ಲಾವಣಿ, ಒಗಟು, ಗಾದೆ, ನಂಬಿಕೆಗಳು ಇತ್ಯಾದಿ ಜನಪದ ಪ್ರಕಾರದ ದೊಡ್ಡ ನಿಧಿಯೇ ಇವರಲ್ಲುಂಟು. ಮಹಿಳೆಯರ ಕುಣಿತ ವಿಶೇಷ ಬಗೆಯದು. ಇದರಲ್ಲಿ ಕೈಕಾಲು ಮತ್ತು ಸೊಂಟಗಳಿಗೆ ಹೆಚ್ಚು ಕೆಲಸ. ಕಲಾವಿದರ ಕಂಠದಿಂದ ವೈವಿಧ್ಯಪೂರ್ಣ ಹಾಡುಗಳು ಮೂಡಿಬರುತ್ತವೆ. ವಿಶಿಷ್ಟ ಸಂಸ್ಕøತಿಯನ್ನು ಉಳಿಸಿಕೊಂಡು ಬಂದಿರುವ ಈ ಮಂದಿ ನಾಗರಿಕತೆಯ ಪ್ರಭಾವಕ್ಕೆ ಒಳಗಾಗಿರುವುದರಿಂದ ಅವರ ಕೆಲವು ವಿಶಿಷ್ಟ ಸಂಪ್ರದಾಯ ಆಚರಣೆಗಳು ಮರೆಯಾಗುತ್ತಿವೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಇವರಲ್ಲಿ ತಕ್ಕಮಟ್ಟಿನ ಸುಧಾರಣೆ ಕಂಡುಬಂದಿದೆ. ಎಂಬತ್ತರ ದಶಕದಲ್ಲಿ ಪಿ.ಕೆ.ಖಂಡೋಬಾ ಲಂಬಾಣಿಗರನ್ನು ಕುರಿತು ವಿಶೇಷ ಅಧ್ಯಯನವನ್ನು ಮಾಡಿದ್ದಾರೆ.

(ಎಮ್.ಆರ್‍ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ